ಆ.15ರ ತನಕ ತ.ನಾಡಿಗೆ 3000 ಕ್ಯೂಸೆಕ್ ನೀರು ಹರಿಸಲು ಪ್ರಾಧಿಕಾರ ಆದೇಶ

ನವದೆಹಲಿ, ಸೆ.29-ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ತೀರ್ಮಾನಿಸಿರುವ ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ, ಅಕ್ಟೋಬರ್‌ 15 ರ ವರೆಗೆ ನಿತ್ಯ 3,000 ಕ್ಯೂಸೆಕ್‌ ನೀರನ್ನು ಹರಿಸಬೇಕು ಎಂದು ಇಂದು ಆದೇಶಿಸಿದೆ.
ತಮಿಳುನಾಡಿಗೆ ಕಾವೇರಿ ಹರಿಸಬಾರದು ಎಂದು ಕನ್ನಡ ಒಕ್ಕೂಟ ಇಂದು ಕರ್ನಾಟಕ ಬಂದ್ ಕರೆ ನೀಡಿದ್ದ ಬೆನ್ನಲ್ಲೇ 3000 ಕ್ಯೂಸೆಕ್ ನೀರು ಬಿಡುವಂತೆ ಸೂಚಿಸಿರುವುದು ರಾಜ್ಯಕ್ಕೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ.
ದೆಹಲಿಯಲ್ಲಿಂದು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ.ಹಲ್ದಾರ್ ನೇತೃತ್ವದಲ್ಲಿ ನಡೆಯಿತು. ಸಿಡಬ್ಲ್ಯೂಆರ್ ಸಿ ತಮಿಳುನಾಡಿಗೆ 3000 ಕ್ಯೂಸೆಕ್ ನೀರು ಬಿಡಬೇಕೆಂಬ ಆದೇಶವನ್ನು ಎತ್ತಿಹಿಡಿಯಿತು.
18 ದಿನಗಳ ಕಾಲ 3000 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡಬೇಕೆಂದು ಸೂಚಿಸಿ, ಪ್ರಾಧಿಕಾರದ ಆದೇಶ ಪರಿಷ್ಕರಿಸಲು ನಿರಾಕರಿಸಿತು.
ಕಾವೇರಿ ನೀರು ಹಂಚಿಕೆ ಬಗ್ಗೆ ಚರ್ಚೆ ವೇಳೆ, ತಮಿಳುನಾಡಿಗೆ ನಿತ್ಯ 12,500 ಕ್ಯೂಸೆಕ್ ನೀರು ಬಿಡಬೇಕು. ಮಾಸಿಕ ನಿಗದಿಯಂತೆ ಅಕ್ಟೋಬರ್‌ನಲ್ಲಿ ಬಿಡಬೇಕಾದ 22.14 ಟಿಎಂಸಿ ನೀರನ್ನು ಸಕಾಲಕ್ಕೆ ಬಿಡಬೇಕು. ಕರ್ನಾಟಕದ ಹೊಸ ಕೊರತೆ ಮಾಪನ ಪ್ರಸ್ತಾವನೆಯನ್ನು ಒಪ್ಪಿಕೊಳ್ಳದಂತೆ ಪ್ರಾಧಿಕಾರದ ಮುಂದೆ ತಮಿಳುನಾಡು ಮನವಿ ಮಾಡಿತು.
ಪ್ರಾಧಿಕಾರದ ಆದೇಶ ಪರಿಷ್ಕರಿಸಲು ಕರ್ನಾಟಕ ಸಭೆಯಲ್ಲಿ ಮನವಿ ಮಾಡಿತು. ಸಂಕಷ್ಟ ಸೂತ್ರದ ಅಡಿಯಲ್ಲಿ ಮಾಸಿಕವಾರು ನೀರು ಹಂಚಿಕೆಗೆ ಹೊಸ ಪಟ್ಟಿ ಸಿದ್ಧಪಡಿಸಿರುವ ಕರ್ನಾಟಕ, ಹೊಸ ಹಂಚಿಕೆ ಪ್ರಕಾರ ನೀರು ಹರಿಸಲು ಮನವಿ ಮಾಡಿತು. ಕರ್ನಾಟಕದ ಮನವಿಯನ್ನು ಪರಿಗಣಿಸದಂತೆ ತಮಿಳುನಾಡು ಒತ್ತಡ ಹೇರಿತು.
ಎರಡೂ ಕಡೆಯ ಮನವಿ ಆಲಿಸಿದ ಪ್ರಾಧಿಕಾರ ಆದೇಶವನ್ನು ಎತ್ತಿ ಹಿಡಿಯಿತು.
18 ದಿನಗಳ ಕಾಲ ನಿತ್ಯ 3,000 ಕ್ಯೂಸೆಕ್ ನೀರು ಹರಿಸಲು ಕರ್ನಾಟಕಕ್ಕೆ ಸೂಚನೆ ನೀಡಿತು. ಸಿಡಬ್ಲ್ಯೂಆರ್‌ಸಿ ಆದೇಶದಲ್ಲಿ ಯಾವುದೇ ಬದಲಾವಣೆ ಇಲ್ಲ. ಅ.15 ರ ವರೆಗೂ ನೀರು ಹರಿಸಬೇಕು ಎಂದು ತಿಳಿಸಿತು.
ಕರ್ನಾಟಕದ ಪರ ಎಸಿಎಸ್‌ ರಾಕೇಶ್ ಸಿಂಗ್, ತಮಿಳುನಾಡು ಪರ ತಾಂತ್ರಿಕ ಮುಖ್ಯಸ್ಥ ಸುಬ್ರಮಣಿ ಸಭೆಯಲ್ಲಿ ಭಾಗಿಯಾಗಿದ್ದರು. ಎರಡು ರಾಜ್ಯಗಳಿಂದ ಅಧಿಕಾರಿಗಳು ಉಪಸ್ಥಿತರಿದ್ದರು.